ಭಾರತದ ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯ: ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಸೈನಿಕ – ಶುಭಾಂಶು ಶುಕ್ಲಾ!

ನವದೆಹಲಿ:
ಭಾರತದ ಹೆಮ್ಮೆಯ ಕ್ಷಣ – ಗಗನಯಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) ತಲುಪಿದ ಮೊದಲ ಭಾರತೀಯ ಸೇನಾಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಶನಿವಾರ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಶೇಷ ವಿಡಿಯೋ ಸಂವಾದ ನಡೆಸಿದರು.

ಬಾಹ್ಯಾಕಾಶದಿಂದ ಭಾರತ ಇನ್ನಷ್ಟು ಭವ್ಯ!
ಶುಭಾಂಶು ಶುಕ್ಲಾ ಬಾಹ್ಯಾಕಾಶದಿಂದ ಪೃಥ್ವಿಯ ದೃಶ್ಯವನ್ನು ವರ್ಣಿಸುತ್ತಾ, "ನಕ್ಷೆಯಲ್ಲಿ ಕಾಣುವದಕ್ಕಿಂತ ಭಾರತ ಬಾಹ್ಯಾಕಾಶದಿಂದ ನೋಡಿದಾಗ ಇನ್ನಷ್ಟು ಅದ್ಭುತವಾಗಿದೆ" ಎಂದು ಹೇಳಿ ತಮ್ಮ ಆನಂದವನ್ನು ಹಂಚಿಕೊಂಡರು.

ಐತಿಹಾಸಿಕ ಹಾರಾಟ 

ಜೂನ್ 25 ರಂದು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ‘ಆಕ್ಸಿಯಮ್-4’ ಮಿಷನ್‌ನ ಭಾಗವಾಗಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಅವರು ಬಾಹ್ಯಾಕಾಶಕ್ಕೆ ಪಯಣ ಆರಂಭಿಸಿದರು. ಇತರ ಮೂರು ಅಂತರರಾಷ್ಟ್ರೀಯ ಗಗನಯಾತ್ರಿಗಳ ಜೊತೆ ಒಟ್ಟಾಗಿ ಹೊರಟ ಈ ಮಿಷನ್‌ ಯಶಸ್ವಿಯಾಗಿ ISS ಗೆ ಡಾಕಿಂಗ್ ಮಾಡಿತು.

41 ವರ್ಷಗಳ ಬಳಿಕ ಭಾರತೀಯ ಹೆಜ್ಜೆ
1984 ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಹಾರಿದ ನಂತರ, 41 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಹೋಗುವ ಎರಡನೇ ಭಾರತೀಯರಾಗಿ ಮತ್ತು ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಸೇನಾಧಿಕಾರಿಯಾಗಿ ಶುಕ್ಲಾ ಇತಿಹಾಸ ನಿರ್ಮಿಸಿದ್ದಾರೆ.

ಪ್ರಧಾನಿಗಳ ಶ್ಲಾಘನೆ

ವಿಡಿಯೋ ಸಂವಾದದಲ್ಲಿ ಪ್ರಧಾನಿ ಮೋದಿ ಅವರು, "ನೀವು ಭೂಮಿಯಿಂದ ದೂರ ಇದ್ದರೂ, ನಿಮ್ಮ ಸಾಧನೆ ನಮ್ಮ ಹೃದಯಗಳಿಗಂತೂ ಬಹುಷ್ಟು ಹತ್ತಿರ. ನಿಮ್ಮ ಹೆಸರಲ್ಲಿಯೇ ಶುಭವಿದೆ ಮತ್ತು ನಿಮ್ಮ ಪ್ರಯಾಣವು ಹೊಸ ಯುಗದ ಶುಭಾರಂಭವಾಗಿದೆ" ಎಂದು ಹೇಳಿದರು.

ವಿಜ್ಞಾನ ಮತ್ತು ಶಿಕ್ಷಣದ ಸೇವೆಗೆ 2 ವಾರಗಳು
ಈ ಎರಡು ವಾರಗಳ ಕಾಲ ಶುಭಾಂಶು ಶುಕ್ಲಾ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದು, ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ ವೈಜ್ಞಾನಿಕ ಸಂಶೋಧನೆಗಳು, ತಂತ್ರಜ್ಞಾನ ಪ್ರದರ್ಶನಗಳು ಮತ್ತು ಶಿಕ್ಷಣ ಸಂವಹನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಪ್ರಧಾನಿ ಕಚೇರಿ ಮತ್ತು ಮೋದಿ ಅವರ ಅಧಿಕೃತ ಎಕ್ಸ್ ಖಾತೆಗಳಲ್ಲಿ ಈ ಸಂವಾದದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಶಕ್ತಿಯಾಗಿ ಮೂಡಿಬರುತ್ತಿದೆ ಎಂಬುದಕ್ಕೆ ಶುಭಾಂಶು ಶುಕ್ಲಾ ಅವರ ಪಯಣವು ಸ್ಪಷ್ಟ ಪುರಾವೆಯಾಗಿದೆ.



Post a Comment

0 Comments